ನಿಯೋಡಿಮಿಯಮ್ 
	ಆವರ್ತಕೋಷ್ಟಕದ III B ಗುಂಪಿಗೆ ಸೇರಿದ ವಿರಳ ಭಸ್ಮಧಾತುಗಳಲ್ಲೊಂದು. ಇದೊಂದು ಲೋಹ. ಇದರ ರಾಸಾಯನಿಕ ಪ್ರತೀಕ Nd ವೇಲೆನ್ಸಿ 3. ಎಲೆಕ್ಟ್ರಾನ್ ವಿನ್ಯಾಸ  ಪರಮಾಣು ತೂಕ 144.24, ಪರಮಾಣು ಸಂಖ್ಯೆ 60. ಪರಮಾಣು ತೂಕ 142,143,144,145,146,148 ಮತ್ತು 150 ಇರುವ ಐಸೊಟೋಪುಗಳೂ ಉಂಟು. ನಿಯೋಡಿಮಿಯಮ್ಮನ್ನು ಶೋಧಿಸಿದ ಕೀರ್ತಿ ಕಾರ್ಲ್ ಆಯರ್ ಫಾನ್ ವೆಲ್ಸ್‍ಬಾಖ್ ಎಂಬ ಜರ್ಮನ್ ವಿಜ್ಞಾನಿಗೆ ಸಲ್ಲುತ್ತದೆ. ನಿಯೋಡಿಮಿಯಮ್ಮನ್ನು ಒಳಗೊಂಡು ಇತರ ವಿರಳ ಭಸ್ಮದಾತುಗಳ ಆಕ್ಸೈಡುಗಳ ಮಿಶ್ರಣವಾದ ಡಿಡಿಮಿಯಮ್ ಎಂಬ ಸಂಯುಕ್ತವನ್ನು ಮೊದಲು ಧಾತುವೆಂದೇ ತಪ್ಪು ತಿಳಿಯಲಾಗಿತ್ತು. ವೆಲ್ಸ್‍ಬಾಖ್ 1885ರಲ್ಲಿ ಡಿಡಿಮಿಯಮ್ಮನ್ನು ಮೊದಲು ರಾಸಾಯನಿಕ ಕ್ರಿಯೆಗೆ ಒಳಪಡಿಸಿ ಅನಂತರ ಪುನಃ ಪುನಃ ಸ್ಫಟಿಕೀಕರಣಗೊಳಿಸುವುದರಿಂದ ನಿಯೋಡಿಮಿಯಮ್ ಮತ್ತು ಪ್ರಿಸಿಯೋಡಿಮಿಯಮ್ ಎಂಬ ಎರಡು ಪ್ರತ್ಯೇಕ ರಾಸಾಯನಿಕ ಘಟಕಗಳನ್ನು ಬೇರ್ಪಡಿಸಿದ.

	ನಿಯೋಡಿಮಿಯಮ್ ಭೂಮಿಯಲ್ಲಿರುವ ಜ್ಞಾಲಾಮುಖಿಗಳಿಂದ ಉಂಟಾದ ಕಲ್ಲು ಬಂಡೆಗಳಲ್ಲಿ, ಸೀಸದ ಎರಡು ಪಟ್ಟು ಹಾಗೂ ತಾಮ್ರದ ಅರ್ಧದಷ್ಟು ಪ್ರಮಾಣದಲ್ಲಿರುತ್ತದೆ. ಮೊನಾಝಾಯಿಟ್ ಹಾಗೂ ಬಾಸ್ಟ್ನೆಸೈಟ್ ಎಂಬ ಖನಿಜಗಳಲ್ಲೂ ನಿಯೋಡಿಮಿಯಮ್ ದೊರೆಯುತ್ತದೆ. ಮೊನಾಝಾಯಿಟನ್ನು ರಫ್ತು ಮಾಡುವಲ್ಲಿ 1947ರ ತನಕ ಭಾರತ ಒಂದು ಪ್ರಮುಖ ದೇಶವಾಗಿತ್ತು. ಆದರೆ ಈಗ ರಫ್ತು ಮಾಡುವುದನ್ನು ನಿರ್ಬಂಧಿಸಿ ಮೊನಾಝಾಯಿಟನ್ನು ವಿರಳ ಭಸ್ಮದಾತುಗಳಿಗೆ ಸಂಬಂಧಿಸಿದ ಸಂಯುಕ್ತಗಳನ್ನು ಉತ್ಪಾದಿಸಲು ಭಾರತದಲ್ಲಿಯೇ ಉಪಯೋಗಿಸಲಾಗುತ್ತಿದೆ. ಇದು ಬೈಜಿಕ ವಿದಳನದ ಒಂದು ಉತ್ಪನ್ನವೂ ಹೌದು. ಎರಡನೆಯ ಮಹಾಯುದ್ಧದ ಕಾಲದ ತನಕ ನಿಯೋಡಿಮಿಯಮ್ಮನ್ನು ಆಂಶಿಕ ಸ್ಫಟಿಕೀಕರಣ ಎನ್ನುವ ಚಿಟ್ಟು ಹಿಡಿಸುವ ವಿಧಾನದಿಂದ ಉತ್ಪಾದಿಸಲಾಗುತ್ತಿತ್ತು. ಆದರೆ ಈಗ ಅದನ್ನು ಅಯಾನ್‍ವಿನಿಮಯ ಎಂಬ ಸುಲಭ ವಿಧಾನದಿಂದ ತಯಾರಿಸಲಾಗುತ್ತದೆ. ಶುದ್ಧ ಧಾತುವನ್ನು ನಿಯೋಡಿಮಿಯಮ್ ಹ್ಯಾಲೈಡುಗಳ ವಿದ್ಯುತ್ ವಿಶ್ಲೇಷಣೆಯಿಂದಾಗಲಿ ಲೀಥಿಯಮ್ ಅಥವಾ ಕ್ಯಾಲ್ಸಿಯಮ್ ಉಪಯೋಗಿಸಿ ಅವನ್ನು ಅಪರ್ಷಿಸುವುದರಿಂದಾಗಲಿ ಉತ್ಪಾದಿಸಲಾಗುತ್ತದೆ.

	ವಿರಳ ಭಸ್ಮಧಾತುಗಳ ಗುಂಪಿನ ಸದಸ್ಯ ಧಾತುವಾಗಿರುವ ನಿಯೋಡಿಮಿಯಮ್ ರಾಸಾಯನಿಕ ಗುಣಗಳಲ್ಲಿ ಅವನ್ನು ಪರಸ್ಪರವಾಗಿ ಬಹಳ ಹೋಲುತ್ತದೆ. ಇದು ಬೆಳ್ಳಿಯಂತೆ ಬೆಳ್ಳಗೆ ಹೊಳೆಯುವ ಲೋಹವಾಗಿದ್ದು, ವಾಯುವಿಗೆ ತೆರೆದಿಟ್ಟಾಗ ಭಸ್ಮೀಭವನ ಹೊಂದಿ ಕಪ್ಪು ಬಣ್ಣ ತಳೆಯುತ್ತದೆ. ಇದನ್ನು ಪ್ಲಾಸ್ಟಿಕ್ ಚೀಲದಲ್ಲಾಗಲಿ ಖನಿಜತೈಲದಲ್ಲಾಗಲಿ ಇಡಲಾಗುತ್ತದೆ. ನಿಯೋಡಿಮಿಯಮ್ ತಂಪು ನೀರಿನೊಂದಿಗೆ ನಿಧಾನವಾಗಿಯೂ ಕಾದ ನೀರಿನ ಜೊತೆಗೆ ತೀವ್ರವಾಗಿಯೂ ಪ್ರತಿಕ್ರಿಯೆ ಹೊಂದಿ ಹೈಡ್ರೊಜನ್ನನ್ನು ಕೊಡುತ್ತದೆ. ಇದರ ದ್ರವನ ಬಿಂದು 1010ºಅ. ಕ್ವಥನಬಿಂದು 3127ºC. ಷಟ್ಪಲಕಾಕೃತಿಯ ದಟ್ಟ ರಚನೆಯುಳ್ಳ ನಿಯೋಡಿಮಿಯಮ್ಮಿನ ಸಾಂದ್ರತೆ 7,003 ಗ್ರಾಮ್/ಮಿಲೀ. ಇತರ ಆಕೃತಿಯ ರಚನೆಯುಳ್ಳ ನಿಯೋಡಿಮಿಯಮ್ ಸಹ ಉಂಟು. ನಿಯೋಡಿಮಿಯಮ್ ನೀಲಿಮಿಶ್ರಿತ ಕೆಂಪು ಬಣ್ಣದ ಆಕ್ಸೈಡುಗಳನ್ನು ಫಾಸ್ಫೇಟುಗಳನ್ನೂ ಟಂಗ್ಸ್ಟೇಟುಗಳನ್ನೂ ಕೊಡುತ್ತದೆ. ನಿಯೋಡಿಮಿಯಮ್ ಅಯಾನಿನ ತ್ರಿಜ್ಯ o.995 Åಅಯಾನಿಗೆ ರೋಹಿತದ ಅತಿನೇರಿಳೆ ಪ್ರದೇಶದಲ್ಲಿಯೂ ದೃಶ್ಯ ಪ್ರದೇಶದಲ್ಲಿಯೂ ಹೀರುವ ಹಂತಗಳು ಇರುವುದರಿಂದ ಇದನ್ನು ಪರಿಮಾಣುವಿಶ್ಲೇಷಣೆಗೆ ಅಳವಡಿಸಿಕೊಳ್ಳಬಹುದು. ಅಯುಗ್ಮ ಎಲೆಕ್ಟ್ರಾನುಗಳನ್ನು ಪಡೆದಿರುವುದರಿಂದ ಇದರ ಅಯಾನ್ ಪ್ರಬಲ ಅನುಕಾಂತತೆಯನ್ನು ತೋರಿಸುವುದು.

	ವಿರಳ ಭಸ್ಮಧಾತುಗಳ ಪೈಕಿ ಸೀರಿಯಮ್ ಮತ್ತು ಇಟ್ರಿಯಮ್ ತರುವಾಯ ಅತಿ ವಿಪುಲವಾಗಿ ದೊರೆಯುವ ಮೂರನೆಯ ಧಾತು ನಿಯೋಡಿಮಿಯಮ್ ಆಗಿದ್ದರೂ ಇದಕ್ಕೆ ವಾಣಿಜ್ಯದ ದೃಷ್ಟಿಯಿಂದ ಅಷ್ಟು ಮಹತ್ತ್ವವೇನೂ ಅಲ್ಲ. ಇದನ್ನು ಎಲೆಕ್ಟ್ರಾನಿಕ್ ಉದ್ಯಮ, ಉಕ್ಕಿನ ಉದ್ಯಮ ಮತ್ತು ಮಿಶ್ರಲೋಹಗಳ ತಯಾರಿಕೆ ಇವುಗಳಲ್ಲಿ ಉಪಯೋಗಿಸಲಾಗುತ್ತದೆ. ನಿಯೋಡಿಮಿಯಮ್ ಮಿಶ್ರಲೋಹಗಳಲ್ಲಿ ಮಿಶ್‍ಮೆಟಲ್ ಎಂಬ ಮಿಶ್ರ ಲೋಹ ಮಹತ್ತ್ವದ್ದು. ಇದನ್ನು ಸಿಗರೇಟ್ ಲೈಟರುಗಳ ಚಕಮಕಿ ಕಲ್ಲನ್ನು ತಯಾರಿಸಲು ಉಪಯೋಗಿಸುತ್ತಾರೆ. ಪಿಂಗಾಣಿ ವಸ್ತುಗಳಿಗೆ ಹೊಳಪು ಕೊಡುವುದು ಮತ್ತು ಬಣ್ಣಬಣ್ಣದ ಗಾಜುಗಳನ್ನು ತಯಾರಿಸುವುದು ನಿಯೋಡಿಮಿಯಮ್ ಸಂಯುಕ್ತಗಳ ಇನ್ನೊಂದು ಮುಖ್ಯ ಉಪಯೋಗ. ಅಶುದ್ಧ ನಿಯೋಡಿಮಿಯಮ್ ಆಕ್ಸೈಡನ್ನು ಗಾಜಿನಲ್ಲಿ ಫೆರಸ್ ಕಬ್ಬಿಣದಿಂದ ಉಂಟಾದ ಹಸಿರು ಬಣ್ಣವನ್ನು ಹೋಗಲಾಡಿಸಲು ಉಪಯೋಗಿಸುತ್ತಾರೆ. ಶುದ್ಧ ನಿಯೋಡಿಮಿಯಮ್ ಆಕ್ಸೈಡನ್ನು ಈ ತನಕ ಗೊತ್ತಿರುವ ಒಂದೇ ಒಂದು ತರಹದ ಅತಿ ಹೊಳಪಿನ ನೇರಿಳೆ ಬಣ್ಣದ ಗಾಜನ್ನು ತಯಾರಿಸಲು ಬಳಸಲಾಗುತ್ತದೆ. ಬೆಸುಗೆದಾರರ ಹಾಗೂ ಗಾಜಿನ ಕೆಲಸ ಮಾಡುವವರ ಕನ್ನಡಕಗಳನ್ನು ತಯಾರಿಸುವ ಗಾಜಿನಲ್ಲಿ ಕಣ್ಣಿಗೆ ಮಾರಕವಾದ ಹಳದಿ ಬಣ್ಣದ ಕಿರಣಗಳಿಂದ ರಕ್ಷಣೆ ಕೊಡಲು ನಿಯೋಡಿಮಿಯಮ್ ಉಪಯೋಗಿಸುತ್ತಾರೆ. ನಿಯೋಡಿಮಿಯಮ್ ಮತ್ತು ಪ್ರಿಸಿಯೋಡಿಮಿಯಮ್ ನೈಟ್ರೇಟುಗಳ ಮಿಶ್ರಣವನ್ನು ಅತ್ಯುಜ್ಜ್ವಲ ಅನಿಲ ಮ್ಯಾಂಟಲುಗಳ ಮೇಲೆ ವ್ಯಾಪಾರ ಸ್ವಾಮ್ಯ ಗುರುತನ್ನು ಮುದ್ರಿಸಲು ಬಳಸುವರು. ನಿಯೋಡಿಮಿಯಮ್ ಗಾಜುಗಳನ್ನು ಲೇಸರುಗಳಲ್ಲಿಯೂ ಉಪಯೋಗಿಸಬಹುದು. ನಿಯೋಡಿಮಿಯಮ್-ಸಲ್ಫೊಐಸೊನಿಕೋಟಿನೇಟ್ ಎಂಬ ಸಂಯುಕ್ತವನ್ನು ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯಲು ಔಷಧವಾಗಿಯೂ ಬಳಸುವರು.
(ಎಸ್.ವೈ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ